ವಿದ್ಯುಜ್ಜನಕ -
	ಯಾಂತ್ರಿಕಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಧನ (ಎಲೆಕ್ಟ್ರಿಕ್ ಜನರೇಟರ್). ವಾಹಕ ಸುರುಳಿಯೊಂದು ಕಾಂತ ಬಲರೇಖೆಗಳನ್ನು ಛೇದಿಸಿದಾಗ ವಿದ್ಯುಚ್ಚಾಲಕ ಬಲ ಉತ್ಪತ್ತಿಯಾಗುತ್ತದೆ. ಈ ತತ್ತ್ವಾಧಾರಿತ ಸಾಧನ ವಿದ್ಯುಜ್ಜನಕ. ಸಾಮಾನ್ಯವಾಗಿ ಇದರಲ್ಲಿ ಎರಡು ಪ್ರಮುಖ ಘಟಕಗಳಿರುತ್ತವೆ: ಕಾಂತಕ್ಷೇತ್ರವನ್ನು ಉಂಟುಮಾಡುವ ಕ್ಷೇತ್ರಕಾಂತ ಎಂಬ ಹೆಸರಿನ ವಿದ್ಯುತ್ಕಾಂತ ಮತ್ತು ಕಾಂತಕ್ಷೇತ್ರವನ್ನು ಛೇದಿಸಲೋಸುಗ ಭ್ರಮಿಸಬಲ್ಲ ಆರ್ಮೆಚರ್ ಎಂಬ ಹೆಸರಿನ ವಾಹಕತಂತಿ ಸುರುಳಿ ವ್ಯವಸ್ಥೆ. ಆರ್ಮೆಚರ್ ಸ್ಥಿರವಾಗಿದ್ದು ಭ್ರಮಿಸುವ ಕ್ಷೇತ್ರಕಾಂತವುಳ್ಳ ವಿದ್ಯುಜ್ಜನಕಗಳೂ ಉಂಟು. ಇಂಥ ವಿದ್ಯುಜ್ಜನಕಗಳಲ್ಲಿ ಉತ್ಪತ್ತಿಯಾಗು ವುದು ಪರ್ಯಾಯಕ ವಿದ್ಯುತ್ಪ್ರವಾಹ. ಎಂದೇ, ಇವು ಪರ್ಯಾಯಕ ವಿದ್ಯುಜ್ಜನಕಗಳು. ದಿಕ್ಪರಿವರ್ತಕ (ಕಾಮ್ಯುಟೇಟರ್) ಎಂಬ ಇಬ್ಭಾಗಿತ ರಿಂಗು ವ್ಯವಸ್ಥೆಯ ನೆರವಿನಿಂದ ಪರ್ಯಾಯಕ ವಿದ್ಯುತ್ಪ್ರವಾಹವನ್ನು ನೇರ ವಿದ್ಯುತ್ಪ್ರವಾಹವಾಗಿ ಪರಿವರ್ತಿಸುವ ವ್ಯವಸ್ಥೆ ನೇರ ವಿದ್ಯುಜ್ಜನಕಗಳಲ್ಲಿ ಇರುವುದು.
(ನೋಡಿ- ಡೈನಮೋ)		
	(ಸಿ.ಟಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ